ಸಕ್ಷಮ್ – 2021

//ಸಕ್ಷಮ್ – 2021

ಭಾರತ ಘನ ಸರ್ಕಾರದ ಆಹಾರ, ನಾಗರೀಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆಯ ವತಿಯಿಂದ ನಡೆಸಲಾದ ಒಂದು ತಿಂಗಳ ಅವಧಿಯ ಸಂರಕ್ಷಣಾ ಅಭಿಯಾನವಾದ “ಸಕ್ಷಮ್ – 2021” ಕಾರ್ಯಕ್ರಮವನ್ನು ಶಿವಮೊಗ್ಗ ನಗರದ ಪಿಇಎಸ್ಐಟಿಎಂ ವಿದ್ಯಾಸಂಸ್ಥೆಯಲ್ಲಿ ದಿನಾಂಕ 10/02/2021 ರಂದು ಮೆಕ್ಯಾನಿಕಲ್ ವಿಭಾಗ ಕಾಲೇಜು ಎನ್ಎಸ್ಎಸ್ ಘಟಕ ಹಾಗೂ ಸುಚೇತನಾ ಕ್ಲಬ್ ನ ಸಹಭಾಗಿತ್ವದಲ್ಲಿ ಆಯೋಜಿಸಲಾಗಿತ್ತು. ಹಸಿರು ಇಂಧನ ಅಭಿಯಾನ ಎಂಬ ಶೀರ್ಷಿಕೆಯ ಅಡಿಯಲ್ಲಿ ಸಂರಕ್ಷಣಾ ಕ್ಷಮತಾ ಮಹೋತ್ಸವ ಕಾರ್ಯಕ್ರಮವನ್ನು
ಪಿಇಎಸ್ಐಟಿಎಂ ವಿದ್ಯಾಸಂಸ್ಥೆಯಲ್ಲಿ ಸಾಕಾರ ಗೊಳಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಆಹ್ವಾನಿತರಾಗಿದ್ದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ನ ಪ್ರತಿನಿಧಿಯಾದ ಶ್ರೀ. ಸುನಿಲ್ ಕೆ ಜಿ ಸಂಪನ್ಮೂಲ ವ್ಯಕ್ತಿಯಾಗಿ ವಿದ್ಯಾರ್ಥಿ ವೃಂದವನ್ನು ಉದ್ದೇಶಿಸಿ ಹಲವು ಉಪಯುಕ್ತ ಮಾಹಿತಿಗಳನ್ನು ಹಾಗೂ ಕಾರ್ಯಕ್ರಮ ಆಯೋಜನೆಯ ಹಿಂದಿರುವ ಮೂಲ ಉದ್ದೇಶವನ್ನು ಮನಮುಟ್ಟುವಂತೆ ತಿಳಿಸಿದರು. ದೇಶದ ಸಾರ್ವಕಾಲಿಕ ಸರ್ವಾಂಗೀಣ ಅಭಿವೃದ್ಧಿ ಹೊಂದಲು ಅತ್ಯವಶ್ಯವಿರುವ ಯುವಶಕ್ತಿಯನ್ನು ಬಡಿದೆಚ್ಚರಿಸಲು ಅನುಕೂಲವಾಗುವಂತೆ ಈ ಸಂರಕ್ಷಣಾ ಕ್ಷಮತಾ ಮಹೋತ್ಸವ ಕಾರ್ಯಕ್ರಮದಡಿಯಲ್ಲಿ ಪರಿಸರ ಸಂಬಂಧಿ ರಸಪ್ರಶ್ನೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಶ್ರೀ. ಸುನಿಲ್ ಕೆ ಜಿ ತಮ್ಮ ಭಾಷಣದಲ್ಲಿ ವಿದ್ಯಾರ್ಥಿ ಸಮೂಹವು ದೈನಂದಿನ ಚಟುವಟಿಕೆಯ ಜೊತೆಜೊತೆಗೆ; ಶೈಕ್ಷಣಿಕ ವಿದ್ಯಾಭ್ಯಾಸದ ಜೊತೆಜೊತೆಗೆ ತಮ್ಮ ಕಾರ್ಯಕ್ಷೇತ್ರದಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ ತಾರ್ಕಿಕ ಮಟ್ಟದಲ್ಲಿ ಆಲೋಚಿಸಬೇಕು ಎಂದು ಸೂಚ್ಯವಾಗಿ ತಿಳಿಸಿದರು. ಭಾರತ ಸರ್ಕಾರವು ಈ ನಿಟ್ಟಿನಲ್ಲಿ ಆಯೋಜಿಸಿರುವ “ಸಕ್ಷಮ್ – 2021” ಕಾರ್ಯಕ್ರಮದಡಿಯಲ್ಲಿ ವಿದ್ಯಾರ್ಥಿವೃಂದ ವು ಪರಿಸರ ಸಂರಕ್ಷಣೆ ಹಾಗೂ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಅನುಕೂಲಕರವಾಗುವಂತೆ ಪ್ರಯತ್ನಿಸಬೇಕೆಂದು ಮನಮುಟ್ಟುವಂತೆ ಹಲವು ಉದಾಹರಣೆಗಳ ಸಮೇತ ತಿಳಿಹೇಳಿದರು.

ಕಾರ್ಯಕ್ರಮದ ಒಂದು ಭಾಗವಾಗಿ ಸಂರಕ್ಷಣಾ ಕ್ಷಮತಾ ಮಹೋತ್ಸವದ ಪ್ರತಿಜ್ಞಾ ವಿಧಿಯನ್ನು ಎಲ್ಲರಿಗೂ ಬೋಧಿಸಲಾಯಿತು. ವಿದ್ಯಾರ್ಥಿಗಳು ಹೆಚ್ಚಿನ ಉತ್ಸುಕತೆಯಿಂದ ರಸಪ್ರಶ್ನೆ ಕಾರ್ಯಕ್ರಮ ಹಾಗೂ ಸಂರಕ್ಷಣಾ ಕ್ಷಮತಾ ಮಹೋತ್ಸವದ ಚಟುವಟಿಕೆಗಳಲ್ಲಿ ಭಾಗವಹಿಸಿದ್ದರು. ಪರಿಸರ ಸಂರಕ್ಷಣೆಗೆ ಇಂಜಿನಿಯರಿಂಗ್ ಪದವೀಧರರು ತಾಂತ್ರಿಕ ಹಾಗೂ ವೈಜ್ಞಾನಿಕ ಸಲಹೆ-ಸೂಚನೆಗಳನ್ನು ನೀಡುವಂತೆ ತಮ್ಮ ಮಾತಿನ ಮೂಲಕ ಪ್ರೇರೇಪಿಸಿದರು. ಇಂಜಿನಿಯರಿಂಗ್ ಕ್ಷೇತ್ರವು ಪರಿಸರವನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಅನೂಹ್ಯವಾದದ್ದನ್ನು ಉಳಿಸಿ-ಬೆಳೆಸುವಲ್ಲಿ ಅಸಾಧಾರಣ ಕೊಡುಗೆಗಳನ್ನು ನೀಡುವಂತೆ ತಿಳಿಹೇಳಿದರು.

ಕಾರ್ಯಕ್ರಮದಲ್ಲಿ ಪಿಇಎಸ್ಐಟಿಎಂ ಕಾಲೇಜಿನ ಪ್ರಾಂಶುಪಾಲರಾದ ಡಾ ಚೈತನ್ಯ ಕುಮಾರ್ ಎಂ ವಿ ಉಪಸ್ಥಿತರಿದ್ದು ವಿದ್ಯಾರ್ಥಿ ಸಮೂಹವನ್ನು ಉದ್ದೇಶಿಸಿ ಮಾತನಾಡುತ್ತ ಪರಿಸರ ಸಂರಕ್ಷಣೆಯ ಬಗ್ಗೆ ಹತ್ತು ಹಲವು ಮಾರ್ಗಗಳನ್ನು ಅನುಸರಿಸುವಂತೆ ಪ್ರೇರೇಪಿಸಿದರು. ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥರಾದ ಡಾ ಬಸವರಾಜಪ್ಪ ವೈ ಹೆಚ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಪರಿಸರ ಮತ್ತು ಅದರ ಸಂರಕ್ಷಣೆ ಶಕ್ತಿ ಸಂಪನ್ಮೂಲಗಳ ಸದ್ಬಳಕೆಯ ಬಗ್ಗೆ ಹಲವು ಪ್ರಾಯೋಗಿಕ ಉದಾಹರಣೆಗಳನ್ನು ನೀಡುವ ಮೂಲಕ ಸ್ವಾರಸ್ಯಕರ ವಿವರಣೆಯನ್ನು ನೀಡಿದರು. ಕಾರ್ಯಕ್ರಮದಲ್ಲಿ ಕಾಲೇಜು ಎನ್ಎಸ್ಎಸ್ ಘಟಕ ಮತ್ತು ಸುಚೇತನ ಕ್ಲಬ್ ನ ಸಂಚಾಲಕರಾದ ಪ್ರಸನ್ನ ನಾಯಕ್ ಹೆಚ್, ಶಿವಾನಂದ ಡಿ ಸಿ ಉಪಸ್ಥಿತರಿದ್ದರು. ಕಂಪ್ಯೂಟರ್ ಸೈನ್ಸ್ ವಿಭಾಗದ ಪ್ರಾಧ್ಯಾಪಕರಾದ ಪುನೀತ್ ಬಿ ಹೆಚ್ ಹಾಗೂ ಸುನಿಲ್ ಕುಮಾರ್ ಹೆಚ್ ಆರ್ ತಮ್ಮ ಕೊಡುಗೆಗಳನ್ನು ನೀಡುವ ಮೂಲಕ ಕಾರ್ಯಕ್ರಮವು ಸುಸೂತ್ರವಾಗಿ ನಡೆಯುವಲ್ಲಿ ಸಹಕರಿಸಿದರು.

By | 2021-02-16T12:10:36+05:30 February 13th, 2021|Mechanical|Comments Off on ಸಕ್ಷಮ್ – 2021

About the Author: